ಕಾಲದಾಚೆಯ ತೀರ... ಹೊಳೆದದ್ದು ತಾರೆ, ಉಳಿದಿದ್ದು ಆಕಾಶ... ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು....
ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ... ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು.....

ನವೋನ್ಮಾದ ಸ್ಪಂದನಕ್ಕಾಗಿ http://samudrateera.wordpress.com/

Wednesday 1 August 2012


ಪ್ರೀತಿಯೆಂದರೆ...
ದೇವಾಮೃತ ಗಂಗೆ//ರಘುನಂದನ ಕೆ.

ಪ್ರೀತಿ ಬರಿಯ ಆಕರ್ಷಣೆಯಲ್ಲ
ಅದುವೆ ಮಾತೆಯ ಮಮತೆ
ಪ್ರೀತಿ ಸತಿಯ ಒಲವೊಂದೆ ಅಲ್ಲ
ಇದುವೆ ವ್ಯಥೆಯ ಮರೆಸುವ ಕಥೆ

ಪ್ರೀತಿ ಅಮವಾಸ್ಯೆಯ ಕತ್ತಲಲ್ಲ
ಇದು ಚಂದ್ರಮನ ಬೆಳದಿಂಗಳು
ಪ್ರೀತಿ ಮೊದಲ ಮಳೆಯ ರಾಡಿಯಲ್ಲ
ಇದು ನೆನೆದ ಬುವಿಯ ಮಣ್ಣ ಬಿಸುಪು


ಪ್ರೀತಿ ಮಂತ್ರವೇ ಶಾಂತಿ ಸೂತ್ರ
ಅಧಿಕವು ಸುಖದಲ್ಲಿ ಇದರ ಪಾತ್ರ
ಪ್ರೀತಿಯಿಂದಲೇ ಶಿಲೆಯಾಗುವುದು ಮೂರ್ತಿ
ಅನಂತ ಶಕ್ತಿಗೂ ಪ್ರೀತಿಯೇ ಸ್ಪೂರ್ತಿ

ಪ್ರೀತಿ ವಿಧವೆಯ ನೋವಿನ ಅಲೆ
ಇದು ಎದೆಯೊಳಗಿನ ಕಾವು
ಪ್ರೀತಿ ಗಡಿಯಲ್ಲಿನ ಗುಂಡಿನ ಸದ್ದಲ್ಲ
ಇದುವೆ ಸೈನಿಕನ ಗುಂಡಿಗೆಯ ಸೆಳವು


ಪ್ರೀತಿ - ಮನಸುಗಳ ಸಂಗಮ
ಪ್ರೀತಿ - ಕನಸುಗಳ ಆಲಿಂಗನ
ಪ್ರೀತಿ - ಮಗುವಿನೊಳಗಿನ ಸಂಭ್ರಮ
ಪ್ರೀತಿ - ದುಃಖ ತಣಿಸುವ ಸಾಂತ್ವನ

ಪ್ರೀತಿ ಚರಿತ್ರೆಯ ಕಥೆಯೊಂದೇ ಅಲ್ಲ
ಇದುವೆ ಮನದೊಳಗಿನ ಕವಿತೆ
ಪ್ರೀತಿ ಬರಿಯ ಆಕರ್ಷಣೆಯಲ್ಲ
 ಅದುವೆ ಮಾತೆಯ ಮಮತೆ


* * * * * * * *

2003ರಲ್ಲಿ ಹೀಗೊಂದು ಕವನ ಬರೆವಾಗ ಮನದಲ್ಲಿ ಏನು ನಡೆದಿತ್ತು, ನೆನಪಿನಲ್ಲಿ ಇಲ್ಲ. ಬರೆದಿಟ್ಟ ಕವನಗಳಿಗೆ ಅಭಿವ್ಯಕ್ತಿಯ ಮಾಧ್ಯಮ ಸಿಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಮಳೆ ಕಾಡುಗಳ ಹಳ್ಳಿಯ ಕತ್ತಲೆಯ ಏಕಾಂತದಲ್ಲಿ ಸ್ವಚ್ಛ ಆಕಾಶ ನೋಡುತ್ತ ಕುಳಿತವನಿಗೆ ಅಭಿವ್ಯಕ್ತಿಯ ಬಯಕೆಗಳೂ ಇರಲಿಲ್ಲ. ಈಗ ನನ್ನದೆನ್ನುವ ಖಾಸಗಿ ಡೈರಿ - ಅಂತರ್ಜಾಲದ ಪುಟಗಳೆದುರು ಹಳೆಯ ಕವನಗಳಿಗೂ ರೆಕ್ಕೆ ಬಂದಿವೆ, ಒಂದೊಂದಾಗಿ ತಾ ಮುಂದು ಎನ್ನುತ್ತ ಹಾರುತ್ತಿವೆ. ಆಗಾಗ್ಗ ಒಂದಿಷ್ಟು ನಿಮ್ಮೆದುರು ಹಾರಾಡಿಯಾವು, ಚೆನ್ನವಿದ್ದರೆ ತಿಳಿಸಿ ಖುಷಿಯಾದೇನು, ಚೆನ್ನವಿಲ್ಲವೆಂದೆನಿಸಿದರೆ ಬೆಳೆಸಿ ಗೆಲುವಾದೇನು.

ಚಿತ್ರಕೃಪೆ : ಅಂತರ್ಜಾಲ

(ಬಣ್ಣ ಚಿತ್ರಗಳಿಲ್ಲದ ಸಹಜ ಓದಿಗೆ  http://samudrateera.wordpress.com/   ಗೆ ಭೇಟಿ ನೀಡಿ)


3 comments:

  1. ಪ್ರೀತಿ...
    ಇಷ್ಟವಾಯಿತು...

    ReplyDelete
  2. ಪ್ರೀತಿಯೆಂದರೆ ಏನೆಲ್ಲಾ...
    ಪ್ರೀತಿಯೆಂದರೆ ಏನೂ ಇಲ್ಲಾ ...
    ಪ್ರೀತಿಯೋಳಗಡೆ ಏನಿಲ್ಲ..??
    ಪ್ರೀತಿಯಿಂದಲೇ ಎಲ್ಲ ... ...
    ಈ ಪ್ರೀತಿಗೆ ಹುಡುಕಿದಷ್ಟೂ ಹೊಸ ಅರ್ಥಗಳಲ್ಲ..??

    ReplyDelete
  3. ಪ್ರೀತಿಯು ಪ್ರತಿ ಗುಂಡಿಗೆಯಲ್ಲೂ ಒಂದು ಹೊಸ ಅರ್ಥ ಹುಡುಕಿ ಬಿಡುತ್ತೆ....

    ಹೊಸ ಆಯಾಮ ಕಲ್ಪಿಸಿ ಬಿಡುತ್ತೆ....

    ಪ್ರೀತಿಯಲ್ಲಿ ಮಮತೆಯಿದೆ.....

    ಪ್ರೀತಿಯಲ್ಲಿ ಮಧುರತೆಯಿದೆ....

    ಪ್ರೀತಿಯಲ್ಲಿ ಮೃದುತ್ವವಿದೆ.....

    ಏನೇ ಆದರೂ ಪ್ರೀತಿಗೆ ಇಂಚಿಂಚೂ ಪರಿಮಳಿಸುವಂತಹ ಗಂಧವಿದೆ.......

    ನಿನ್ನ ಪ್ರೀತಿಯ ಬರಹ ಚಂದವಿದೆ......

    ReplyDelete

ನಿಮ್ಮ ಅನಿಸಿಕೆ