ಕಾವ್ಯ ಲಹರಿ//ರಘುನಂದನ ಕೆ.
ಕವನವಾಗಬೇಕೆಂದು ಕನವರಿಸಿ ಕವನವಾಗದೇ ಉಳಿದರೂ
ಕವನದಂತೆ ಕಾಣಿಸಿಕೊಳ್ಳುವ ಸಾಲುಗಳು ಹೀಗೆಲ್ಲಾ ಬರೆಯಲ್ಪಟ್ಟಾಗ…
* * * * * * *
ಭೋರೆಂದು ಸುರಿದರೂ ಮೀರದಾ ಕಡಲು
ಕಲ್ಲಾಗಿ ಕುಳಿತ ಬದುಕಲ್ಲಿ
ಅಹಲ್ಯೆಯ ಕನಸ ಪಳೆಯುಳಿಕೆ
ಇಂದ್ರಛಾಪದ ಕನವರಿಕೆ
ತನ್ನದಲ್ಲದ ಶಪಥಗಳಲ್ಲಿ
ಕರಗಿದ ಕರ್ಣ ಕುಂಡಲ ಹೊಳಪು
ಅಳಿದು ಹೋದವರ ನೆನಪು
ಅರಮನೆಯ ಅಂತರಂಗದಲ್ಲಿ
ಊರ್ಮಿಳೆಯ ನಿಟ್ಟುಸಿರ ಕಾವು
ಕೊನೆಯಿರದ ವನವಾಸದ ನೋವು
ಸುಂದರಿಯರ ಕನಸಲ್ಲಿ ಚಂದಿರ
ಬುದ್ಧ ನಡೆದ ದಾರಿಯಲ್ಲಿ
ಯಶೋಧರೆಯ ಬಿಸಿಯುಸಿರ ತಾಪ
ಮಂಜು ಕವಿದ ಮುಂಜಾವುಗಳ ಶಾಪ
ಪಥದ ಜಾಡಲ್ಲಿ ಶಬರಿಯ ಪ್ರೇಮ
ಕಾಯೋ ಕಾಯಕದಲ್ಲಿ ಕಾಯ ಕರಗಿತು
ಕಾಲದೊಳಗಿಂದ ಕಾದವರ ಹೆಸರುಳಿಯಿತು
* * * * * * *
ಚಿತ್ರಕೃಪೆ : ಅಂತರ್ಜಾಲ